ಬೆಳಗಾವಿಯ ರಾಮನಗರದ ವಡ್ಡರವಾಡಿಯ ನಿವಾಸಿ ನಾಗರಾಜ ಗಾಡಿವಡ್ಡರ(26) ಕೊಲೆಯಾದ ಯುವಕ. ಶಿವಬಸವ ನಗರದ ರಸ್ತೆಯಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತ ಹೋಗುತ್ತಿದ್ದ ನಾಗರಾಜನ ಕೊಲೆ ಮಾಡಲು ಬೈಕ್ ಮೇಲೆ ಬಂದ ಮೂವರು ಆರೋಪಿಗಳು ಹೊಂಚು ಹಾಕಿ ಕಾಯುತ್ತಿದ್ದರು. ಬೈಕ್ನ್ನು ದಾಟಿ ಮುಂದೆ ನಾಗರಾಜ ಹೋಗುತ್ತಿದ್ದಂತೆ ಹಿಂದಿನಿಂದ ಓರ್ವ ಆರೋಪಿ ಕಲ್ಲಿನಿಂದ ಜೋರಾಗಿ ತಲೆಗೆ ಹೊಡೆದಿದ್ದಾನೆ. ಹೊಡೆತದ ರಭಸಕ್ಕೆ ನಾಗರಾಜ ಅಲ್ಲಿಯೇ ಕುಸಿದು ಬಿದ್ದಿದ್ದಾನೆ.
ಬಳಿಕ ಆರೇಳು ಬಾರಿ ಮತ್ತೆ ಕಲ್ಲಿನಿಂದ ನಾಗರಾಜನ ತಲೆಗೆ ಹೊಡೆದು ಬಳಿಕ ಮೂವರು ಆರೋಪಿಗಳು ಬೈಕ್ ಮೇಲೇರಿ ಅಲ್ಲಿಂದ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ನಿನ್ನೆ ರಾತ್ರಿಯೇ ಘಟನಾ ಸ್ಥಳಕ್ಕೆ ಮಾಳಮಾರುತಿ ಠಾಣೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದರು.
ಕೊಲೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ. ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಮಾಳಮಾರುತಿ ಠಾಣೆಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇಂದು ಬೆಳಗ್ಗೆ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
