ರಾಜನಂದಗಾನ್: ಬಿಜೆಪಿಯ ಹಿರಿಯ ನಾಯಕ ಮತ್ತು ಅವಿಭಜಿತ ಮಧ್ಯಪ್ರದೇಶದ ಮಾಜಿ ಸಚಿವ ಲೀಲಾರಾಮ್ ಭೋಜ್ವಾನಿ(Leelaram Bhojwani) ಅವರು ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಪಕ್ಷದ ಮುಖಂಡರು ಗುರುವಾರ ತಿಳಿಸಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಭೋಜ್ವಾನಿ ನಿಧನಕ್ಕೆ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಮಾಜಿ ಸಿಎಂ ರಮಣ್ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜನಂದಗಾಂವ್ ನಗರದ ಮೂಲದ ಭೋಜ್ವಾನಿ ಅವರನ್ನು ಕೆಲವು ದಿನಗಳ ಹಿಂದೆ ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ರಾಯ್‌ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಕೊನೆಯುಸಿರೆಳೆದರು. ಗುರುವಾರ ರಾಜನಂದಗಾಂವ್‌ನಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗುವುದು ಎಂದು ಪಕ್ಷದ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಎರಡು ಬಾರಿ ಶಾಸಕರಾಗಿದ್ದ ಭೋಜ್ವಾನಿ ಮೊದಲು 1990 ರಲ್ಲಿ ಶಾಸಕರಾಗಿ ಆಯ್ಕೆಯಾದರು ಮತ್ತು ನಂತರ 1998 ರಲ್ಲಿ ರಾಜನಂದಗಾಂವ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು. ಭೋಜ್ವಾನಿ 1990 ರಲ್ಲಿ ಅವಿಭಜಿತ ಮಧ್ಯಪ್ರದೇಶದ ಸುಂದರ್ ಲಾಲ್ ಪಟ್ವಾ ಸರ್ಕಾರದಲ್ಲಿ ಕಾರ್ಮಿಕ ಇಲಾಖೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
