ನಗದು ವಹಿವಾಟುಗಳನ್ನು ಪತ್ತೆ ಹಚ್ಚಿ, ತೆರಿಗೆ ಸೋರಿಕೆ ತಡೆಯುವ ಸಲುವಾಗಿ ಆದಾಯ ತೆರಿಗೆ ಇಲಾಖೆ ಕಾರ್ಯ ಪ್ರವೃತ್ತವಾಗಿದೆ. ಇಂಥ ನಗದು ವಹಿವಾಟುಗಳಲ್ಲಿ ಪ್ಯಾನ್ ಸಂಖ್ಯೆಯನ್ನು ಬಳಸಬೇಕು ಎನ್ನುವ ಕಾನೂನು ಜಾರಿಯಲ್ಲಿದ್ದರೂ, ಬಹುತೇಕ ಕಡೆ ಅದು ಪಾಲನೆಯಾಗಿಲ್ಲ. ಹೀಗಾಗಿ, ಇಂಥ ನಗದು ವಹಿವಾಟುಗಳು ಐಟಿ ರಿಟರ್ನ್ಸ್‌ನಲ್ಲಿ ದಾಖಲಾಗುವುದಿಲ್ಲ. ತೆರಿಗೆ ತಪ್ಪಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.
ಪ್ಯಾನ್ ಸಂಖ್ಯೆ ಪಡೆಯದೇ ನಗದು ವ್ಯವಹಾರ ನಡೆಸಿದ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೂ ತೆರಿಗೆ ಇಲಾಖೆ ಚಿಂತನೆ ನಡೆಸಿದೆ. ಖಾಸಗಿ ಆಸ್ಪತ್ರೆಗಳ ಡೇಟಾವನ್ನು ಪರಾಮರ್ಶಿಸಿ, ನಗದು ರೂಪದಲ್ಲಿ ವಹಿವಾಟು ನಡೆಸಿದ ರೋಗಿಗಳ ವಿವರವನ್ನು ಪತ್ತೆ ಹಚ್ಚಲಾಗುತ್ತದೆ. ಅವರ ಐಟಿಆರ್ ಅಥವಾ ವಾರ್ಷಿಕ ಸ್ಟೇಟ್‌ಮೆಂಟ್‌ನಲ್ಲಿ ನಗದು ವ್ಯವಹಾರ ದಾಖಲಾಗಿದೆಯೇ ಎನ್ನುವ ಅಂಶವನ್ನು ತೆರಿಗೆ ಇಲಾಖೆ ಪರಿಶೀಲಿಸಲಿದೆ.
ಅನುಮಾನ ಬಂದರೆ, ನೋಟಿಸ್ ನೀಡಿ ಕ್ರಮ ಕೈಗೊಳ್ಳಲಿದೆ. ಮುಂಬಯಿ, ಔರಂಗಾಬಾದ್, ನಾಸಿಕ್, ಜಲ್ನಾದಂಥ ನಗರಗಳಲ್ಲಿ ಐಟಿ ಇಲಾಖೆ ಇತ್ತೀಚೆಗೆ ಕಾರ್ಯಾಚರಣೆ ನಡೆಸಿದ್ದು, ನಗದು ವ್ಯವಹಾರಗಳು ಹೆಚ್ಚಿನ ಮಟ್ಟದಲ್ಲಿರುವುದು ಕಂಡು ಬಂದಿದೆ. ಈ ದಾಳಿಗಳಲ್ಲಿ ಹೆಚ್ಚಿನ ನಗದು ಮತ್ತು ಆಭರಣಗಳನ್ನು ಇಲಾಖೆ ವಶಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಗದು ವಹಿವಾಟುಗಳ ಮೇಲೆ ನಿಗಾ ಹೆಚ್ಚಿಸಲಾಗಿದೆ.

