ಹುಬ್ಬಳ್ಳಿ: ಅತಿಸೂಕ್ಷ್ಮ ಪ್ರದೇಶಗಳಲ್ಲಿ ಒಂದು ಎನ್ನುವ ಕುಖ್ಯಾತಿ ಪಾತ್ರವಾಗಿರುವ ಹುಬ್ಬಳ್ಳಿ- ಧಾರವಾಡದ ಈದ್ಗಾ ಮೈದಾನ ಇದೀಗ ಮತ್ತೊಮ್ಮೆ ಚರ್ಚೆಯಲ್ಲಿದೆ. ಈ ಬಾರಿಯೂ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸುವ ಬಗ್ಗೆ ಪರ – ವಿರೋಧ ವ್ಯಕ್ತವಾಗಿದೆ.
ಪ್ರತಿ ಬಾರಿ ಗಣೇಶೋತ್ಸವ ಪ್ರಾರಂಭವಾದ ಸಂದರ್ಭದಲ್ಲಿಯೂ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ ಚರ್ಚೆಯಾಗುವುದರೊಂದಿಗೆ, ವಿವಾದದ ಕೇಂದ್ರ ಬಿಂದುವಾಗುತ್ತದೆ. ಹುಬ್ಬಳ್ಳಿಯ ಈದ್ಗಾ ಮೈದಾನದ ಕರಾಳತೆ ಹಾಗೂ ಸಾವು – ನೋವಿಗೆ ಸಾಕ್ಷಿಯಾದ ಸ್ಥಳವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಮೈದಾನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ವಿಚಾರವು ಪರ – ವಿರೋಧಕ್ಕೆ ಕಾರಣವಾಗುತ್ತಿದೆ.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಹಾಗೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬಾರದು ಎಂದು ಆಗ್ರಹಿಸಿ, ಕಳೆದ ವರ್ಷ ಹುಬ್ಬಳ್ಳಿ ಅಂಜುಮನ್ ಸಂಸ್ಥೆ, ಎಐಎಂಐಎಂ ಹಾಗೂ ಎಸ್‌ಡಿಪಿಐ ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳು ಹುಬ್ಬಳ್ಳಿ- ಧಾರವಾಡ ಪಾಲಿಕೆಗೆ ಮನವಿ ಸಲ್ಲಿಸಿದ್ದವು.
ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಹಾಗೂ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಬಾರದು ಎಂದು 20ಕ್ಕೂ ಹೆಚ್ಚು ಸಂಘಟನೆಗಳು ಆಗ್ರಹಿಸಿದ್ದವು. ಇದೇ ಸಂದರ್ಭದಲ್ಲಿ ನಾಲ್ಕು ಸಮಿತಿಗಳು ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದವು. ಪ್ರಮೋದ್ ಮುತಾಲಿಕ್ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಹುಬ್ಬಳ್ಳಿ – ಧಾರವಾಡ ಪಾಲಿಕೆ ಆಯುಕ್ತರ ಕಚೇರಿಯ ಮುಂದೆ ಎರಡು ದಿನ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ತೀವ್ರ ಪರ-ವಿರೋಧದ ಚರ್ಚೆಗಳ ನಡುವೆ ಎರಡು ದಿನದ ಉತ್ಸವಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಉತ್ಸವವು ಪೊಲೀಸ್ ಸರ್ಪಗಾವಲಿನಲ್ಲಿ ನಡೆದಿತ್ತು.
ಗಲಭೆಗಳು ಸಹ ನಡೆದಿದ್ದು, ಕಾನೂನು – ಸುವ್ಯವಸ್ಥೆಗೆ ಆದ್ಯತೆ ನೀಡಬೇಕು ಎನ್ನುವ ಆಗ್ರಹ ಕೇಳಿಬಂದಿತ್ತು. ಪೊಲೀಸ್ ಆಯುಕ್ತರ ಬದಲಾವಣೆಯೂ ಆಗಿದೆ.
ಇದೀಗ ಮೇಲ್ಸೇತುವೆ ಕಾಮಗಾರಿಗೆ ಇರುವ ಕಾಂಪೌಂಡ್ ಭಾಗಶಃ ತೆರವು, ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಕ್ರಮ ತೆಗೆದುಕೊಳ್ಳಬೇಕಿದೆ. ಅಲೋಕ್ ಕುಮಾರ್ ಅವರು ನವನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಆರ್. ಹಿತೇಂದ್ರ ಅವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ವಿಭಾಗದ ಅಧಿಕಾರಿಗಳೊಂದಿಗೆ ಮುಂಜಾಗ್ರತಾ ಸಭೆ ನಡೆಸಲಿದ್ದಾರೆ.

