ರೌಡಿಶೀಟರ್‌ಗಳ ದಂಡು ಜಮಾಯಿಸಿತ್ತು. ಎಲ್ಲರೂ ಒಂದೇ ಮೈದಾನದಲ್ಲಿ ಶಾಲಾ ಮಕ್ಕಳು ಪ್ರಾರ್ಥನೆಗೆ ನಿಂತಂತೆ ಸಾಲುಗಟ್ಟಿ ನಿಂತಿದ್ದರು. ಇಷ್ಟು ಮಂದಿ ರೌಡಿಗಳು ಒಂದೇ ಸ್ಥಳದಲ್ಲಿ ಸೇರಿರುವುದನ್ನು ಕಂಡು ಯಾವುದೋ ಅಪರಾಧ ನಡೆದಿರಬಹುದು ಅಥವಾ ಏನೋ ದೊಡ್ಡ ಸಂಚು ರೂಪಿಸಲು ಸ್ಕೆಚ್ ಹಾಕುತ್ತಿರಬಹುದು ಎಂದು ತಪ್ಪಾಗಿ ತಿಳಿದುಕೊಳ್ಳಬೇಡಿ.
ಹುಬ್ಬಳ್ಳಿ-ಧಾರವಾಡದ ರೌಡಿಶೀಟರ್‌ಗಳೆಲ್ಲ ಮೈದಾನದಲ್ಲಿ ಓಡೋಡಿ ಬಂದು ಗಪ್‌ಚುಪ್ ಎಂದು ನಿಂತಿದ್ದರು. ಹುಬ್ಬಳ್ಳಿ ಧಾರವಾಡ ನಗರ ವ್ಯಾಪ್ತಿಯಲ್ಲಿ ಮುಂಬರುವ ಗಣೇಶ ಚತುರ್ಥಿ & ಈದ್ ಮಿಲಾದ್ ಹಬ್ಬದ ಪ್ರಯುಕ್ತ ಇವರಿಗೆಲ್ಲ ಸ್ಪೆಷಲ್ ಆಮಂತ್ರಣ ನೀಡಿ ಪೊಲೀಸರು ಕರೆಸಿಕೊಂಡಿದ್ದರು.
ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳು ಬರುತ್ತಿರುವುದರಿಂದ ನಗರದಲ್ಲಿ ಸಾರ್ವಜನಿಕರ ಶಾಂತಿ, ಸುರಕ್ಷತೆ ಮತ್ತು ಭದ್ರತೆ ಸೇರಿದಂತೆ ಕಾನೂನು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ರೌಡಿಶೀಟರ್‌ಗಳ ಪರೇಡ್ ರೌಡಿಶೀಟರ್‌ಗಳೆಲ್ಲ ಬಂದು ಕೈಕಟ್ಟಿ ನಿಂತಿದ್ದರು. ಇನ್ನು ಪರೇಡ್ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಕಮೀಷನರ್ ಶಶಿಕುಮಾರ್, ರೌಡಿ ಚಟುವಟಿಕೆಗಳನ್ನು ಬಿಟ್ಟು ಸುಧಾರಣೆಯಾಗುತ್ತೇವೆಂದು ಮನವಿ ನೀಡಿದವರ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೊಸ ಆಯ್ಕೆಯೊಂದನ್ನು ನೀಡಿದರು.
ಗ್ಯಾಂಗ್ ಕಟ್ಟಿಕೊಂಡು ರೌಡಿಸಂ ಮಾಡಿದ್ರೆ ಕಥೆ ಮುಗೀತು. ನಿಮ್ಮನ್ನ ಬುಡ ಸಮೇತ ಕಿತ್ತು ಹಾಕುತ್ತೇವೆ ಎಂದು ಅವಾಜ್ ಕೂಡ ಹಾಕಿದರು. ನೀವು ಸಮಾಜದಲ್ಲಿ ಉತ್ತಮರಾಗಿ ಜೀವನ ನಡೆಸಿದ್ರೆ ಸರಿ. ಇಲ್ಲದಿದ್ರೆ ನಿಮ್ಮ ಜೀವನದಲ್ಲಿ ನಾವು ಎಂಟ್ರಿ ಕೊಡ್ತೀವಿ. ನೀವು ಚೆನ್ನಾಗಿ ಜೀವನ ನಡೆಸ್ತೀವಿ ಅನ್ನೋದಾದ್ರೆ, ನಾವೇ ನಿಮ್ಮ ರೌಡಿಶೀಟರ್ ತೆಗೆದು ಹಾಕುತ್ತೇವೆ. ಬಾಲ ಬಿಚ್ಚಿದ್ರೆ ನಮ್ಮ ಸ್ಟೈಲಲ್ಲೇ ಉತ್ತರ ಕೊಡ್ತೀವಿ ಎಂದೂ ರೌಡಿಗಳ ಬೆವರಿಳಿಸಿದ್ದಾರೆ.
ಮಾಹಿತಿಯಂತೆ ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಒಟ್ಟು 862 ಜನ ರೌಡಿಶೀಟರ್ ಹಾಜರಾಗಿದ್ದರು. ಒಟ್ಟು 8 ರೌಡಿಶೀಟರ್‌ಗಳನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ. 295 ರೌಡಿಶೀಟರ್‌ಗಳ ವಿರುದ್ಧ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ. 15 ಜನ ರೌಡಿಶೀಟರ್‌ಗಳ ವಾರಂಟ್ ಇದ್ದು, ಈಗಾಗಲೇ ಎಲ್ಲ ರೌಡಿಶೀಟರ್‌ಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಾರ್ವಜನಿಕರ ಶಾಂತಿ ನೆಮ್ಮದಿ ಮತ್ತು ಕಾನೂನು ಸುವ್ಯವಸ್ಥೆ ಹಾಳು ಮಾಡುವಂತಹ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಒಂದು ವೇಳೆ ಅಂತಹ ಚಟುವಟಿಕೆಗಳಲ್ಲಿ ತೊಡಗಿದ್ದರ ಬಗ್ಗೆ ಪೊಲೀಸರಿಗೆ ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
