ಹುಬ್ಬಳ್ಳಿ, ಆಗಸ್ಟ್ 02: ಹುಬ್ಬಳ್ಳಿಯ ಎಂಟಿಎಸ್ ಕಾಲೋನಿ ಬಳಿ ಕುಖ್ಯಾತ ದರೋಡೆಕೋರನೊಬ್ಬನ ಮೇಲೆ ಉಪನಗರ ಪೊಲೀಸ್ ಇನ್ಸ್‌ಪೆಕ್ಟರ್ ಗುಂಡಿನ ದಾಳಿ ನಡೆಸಿದ್ದು, ಶುಕ್ರವಾರ ಮತ್ತೊಂದು ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ನಗರ ಎಚ್ಚೆತ್ತುಕೊಂಡಿದೆ.
ಕೆಲ ದಿನಗಳ ಹಿಂದೆ ಚನ್ನಮ್ಮ ವೃತ್ತದ ಬಳಿ ಸರ, ಉಂಗುರ, ಮೊಬೈಲ್ ಹಾಗೂ ನಗದು ಸುಲಿಗೆ ಮಾಡಿದ್ದ ಆರೋಪಿ ಅರುಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ವಿಚಾರಣೆ ವೇಳೆ ಅರುಣ್ ಪೊಲೀಸರಿಗೆ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಇಬ್ಬರ ಬಗ್ಗೆ ಮಾಹಿತಿ ನೀಡುವುದಾಗಿ ಆರೋಪಿ ಪೊಲೀಸರನ್ನು ಎಂಟಿಎಸ್ ಕಾಲೋನಿಗೆ ಕರೆದೊಯ್ದಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಅರುಣ್ ಅವರ ಗಮನ ಬೇರೆಡೆ ಸೆಳೆದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಇನ್ಸ್ ಪೆಕ್ಟರ್ ಎಂಎಸ್ ಹೂಗಾರ್ ಅವರು ಅರುಣ್ ಅವರ ಕಾಲಿಗೆ ಗುಂಡು ಹಾರಿಸಿ ಗಾಯಗೊಳಿಸಿದರು. ಗಾಯಗೊಂಡ ಆರೋಪಿ ಹಾಗೂ ಪೊಲೀಸರನ್ನು ಚಿಕಿತ್ಸೆಗಾಗಿ ಕಿಮ್ಸ್‌ಗೆ ರವಾನಿಸಲಾಗಿದೆ.
ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
